Friday 25 March 2016

ಅನುಭಾವ ಸಾಹಿತ್ಯ ಪ್ರತಿಷ್ಠಾನ.

“ಸರ್ಕಾರವು ಬೀದರದಲ್ಲಿ ಅನುಭಾವ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಲಿ”-ಡಾ. ಪ್ರಕಾಶ ಖಾಡೆ .

  
                                                                                                                                                                                                                                                                                                                                                                                                                                                                                                                                                                                                                                   
ಬೀದರ ಜಿಲ್ಲೆಯು ತತ್ವಪದ,ಸೂಫಿ,ವಚನ ಮತ್ತು ದಾಸ ಸಾಹಿತ್ಯ ಸೇರಿದಂತೆ ಅನುಭಾವ ಸಾಹಿತ್ಯದ ಸಮೃದ್ದ ನೆಲವಾಗಿದ್ದು ಹಾಗಾಗಿ ಬೀದರದಲ್ಲಿ ಕರ್ನಾಟಕ ಸರ್ಕಾರವು ಅನುಭಾವ ಸಾಹಿತ್ಯ ಪ್ರತಿಷ್ಠಾನ ಸ್ಥಾಪಿಸಿ ಅನುದಾನ ಬಿಡುಗಡೆ ಮಾಡುವ ಮೂಲಕ ಅನುಭಾವ ಸಾಹಿತ್ಯ ಪ್ರಚಾರ ಮತ್ತು ಪ್ರಸಾರ ಕಾರ್ಯ ಮಾಡಲಿ ಎಂದು ಬಾಗಲಕೋಟದ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಪ್ರಕಾಶ ಖಾಡೆ ಸರ್ಕಾರಕ್ಕೆ ಒತ್ತಾಸೆ ತಿಳಿಸಿದರು.
ಅವರು ದಿನಾಂಕ- 25/03/2016 ರಂದು ಮುಂಜಾನೆ 10.30 ಗಂಟೆಗೆ  ಬೀದರಿನ ಹೋಟಲ್ ಕೃಷ್ಣಾ ರಿಜೇನ್ಸಿಯ ಸಭಾಂಗಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ,ಬೀದರ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಎರಡು ದಿನಗಳ ತತ್ವಪದ ಮತ್ತು ಸೂಫಿ ಸಾಹಿತ್ಯ ಪರಂಪರೆ ಕುರಿತ ವಿಚಾರ ಸಂಕಿರಣವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ತತ್ವಪದಕಾರರ ಹಾಗೂ ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಭಾಷಾ ಸೌಹಾರ್ದತೆ,ಅನ್ಯಮತ ಸಂಹಿಷ್ಣುತೆ,ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಈ ಸಾಹಿತ್ಯ ಪ್ರಮುಖ ಪಾತ್ರವಹಿಸಿದೆ.ಈ ನಿಟ್ಟನಲ್ಲಿ ಇನ್ನೂ ಹೆಚ್ಚಿನ ಕಾರ್ಯ ಮಾಡಿ ಈ ಸಾಹಿತ್ಯವನ್ನು ಬೆಳಕಿಗೆ ತರುವ ಅವಶ್ಯಕತೆ ಇದೆ ಎಂದು ತಿಳಿಸಿದರು.


   ಮುಖ್ಯ ಅತಿಥಿಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀ ಸುರೇಶ ಚನಶೆಟ್ಟಿ ಆಗಮಿಸಿ ಮಾತನಾಡುತ್ತಾ ಗಡಿ ಭಾಗವಾದ ಬೀದರದಲ್ಲಿ ಕನ್ನಡ ಪರ ಹಾಗೂ ಸಾಹಿತ್ಯಿಕವಾದ ಚಟುವಟಿಕೆಗಳು ನಿರಂತರವಾಗಿ ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು ಸಕ್ರೀಯವಾಗಿ ಕನ್ನಡ ಬೆಳವಣಿಗೆಗೆ ಶ್ರಮಿಸಬೇಕು ಹಾಗೂ ಇಂತಹ ಕಾರ್ಯಗಳಿಗೆ ಪರಿಷತ್ತಿನ ಸಹಕಾರ ಇರುತ್ತದೆ ಎಂದರು. 

ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾದ ಶ್ರೀ ಶಿವಕುಮಾರ ನಾಗವಾರ ಹಾಗೂ ಸಿದ್ದಾರ್ಥ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಬಿ.ಕೆ.ಮಠಪತಿ   ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಜನ ಸಾಮಾನ್ಯರ ಅನುಭಾವದ ನೆಲೆಯಿಂದ ಬಂದ ತತ್ವಪದ ಹಾಗೂ ಸೂಫಿ ಸಾಹಿತ್ಯವು ಜನರ ಬದುಕಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ, ಇವುಗಳ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದರು.                                                                                                                                                                                                                                                                                                                                                                                                                                                                                                                           
   ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜಗನ್ನಾಥ ಹೆಬ್ಬಾಳೆ ವಹಿಸಿಕೊಂಡು ಮಾತನಾಡುತ್ತಾ ದಾಸರು, ಶರಣರು.ತತ್ವಪದಕಾರರು,ಸೂಫಿ-ಸಂತರು ಜನಹಿತ ಸಂದೇಶ ನೀಡಿ ಜನಪರ ಚಿಂತಕರಾದವರು. ಬದುಕಬೇಕಾದ ಜೀವನಕ್ಕೆ ರೀತಿ-ನೀತಿಗಳು,ಮಾನವೀಯ ಮೌಲ್ಯಗಳು ಭೋದಿಸಿದರು. ಈ ಸಾಹಿತ್ಯವು ಸಮಾಜದ ನೋವು  ನಲಿವುಗಳಿಗೆ  ಸ್ಪಂದಿಸುವ  ಸಾಹಿತ್ಯವಾಗಿವೆ.  ಉತ್ತಮ ಸಂಸ್ಕಾರ ನೀಡುವ ಈ ಸಾಹಿತ್ಯವನ್ನು ನಿರಂತರವಾಗಿ ಪ್ರಚಾರ ಮತ್ತು ಪ್ರಸಾರ ಮಾಡಬೇಕೆಂದು ತಿಳಿಸಿದರು. 
ಕಾರ್ಯಕ್ರಮದ ಪ್ರಾರಂಭದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ಸಂಜೀವಕುಮಾರ ಅತಿವಾಳೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ಲಕ್ಷಕೆ ಒಳಗಾದ ಸಾಹಿತ್ಯವನ್ನು ಮತ್ತು ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆಯ ಮುಖಾಂತರ ಮಾಡಲಾಗುವುದು ಎಂದರು.



ಕು.ಮಹೇಶ್ವರಿ ಶಿವಶರಣಪ್ಪ ಹಾಗೂ ಕು. ರಾಧಿಕಾ ರವರು ತತ್ವಪದ ಗಾಯನ ನಡೆಸಿಕೊಟ್ಟರು. ಶ್ರೀ ರವೀಂದ್ರ ಲಂಜವಾಡಕರ್ ಸ್ವಾಗತಿಸಿದರು, ಶ್ರೀ ಅಬ್ದುಲ್ ರಹೀಮ   ನಿರೂಪಿಸಿದರು. ಶ್ರೀ ಶಾಮರಾವ ನೆಲವಾಡೆ ವಂದಿಸಿದರು. ವೇದಿಕೆಯ ಪದಾಧಿಕಾರಿಗಳು, ಸಾಹಿತಿಗಳು ಮತ್ತು ಕನ್ನಡ ಆಸಕ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ವಂದನೆಗಳೊಂದಿಗೆ,

Saturday 5 July 2014

ಅವಧಿ :ಮಣ್ಣೆತ್ತಿನ ಹಬ್ಬ.

- ಡಾ ಪ್ರಕಾಶ ಗ ಖಾಡೆ
ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಮುಂಗಾರಿನ ಆರಂಭದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ .ಕಾರ ಹುಣ್ಣಿವೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ,ಮಣ್ಣು ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದುದು.ವಷರ್ಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ.ಆಷಾಢ,ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣು ಪೂಜೆಯದ್ಯೋತಕವಾಗಿವೆ,ಮಣ್ಣೆತ್ತು,ಗುಳ್ಳವ್ವ,ಹುತ್ತಪ್ಪ,ಗಣಪ್ಪ ಹಾಗೂ ಜೋಕುಮಾರ ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ.ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು ಕಾರ ಹುಣ್ಣಿಮೆಯಲ್ಲಿ ವಿಶೇಷವಾಗಿ ಮೈ ತೊಳೆದು,ಬಣ್ಣ ಹಚ್ಚಿ,ವಿವಿಧ ಪರಿಕರಗಳಿಂದ ಸಿಂಗಾರ ಮಾಡಿ,ಹೋಳಿಗೆ,ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು.ದನಕರುಗಳನ್ನು ಮನಬಂದಂತೆ ಒಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿಕಾಯಕಕ್ಕೆ ಸಜ್ಜು ಮಾಡುತ್ತಾರೆ.
ಕಾರ ಹುಣ್ಣಿವೆ ಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವ್ಯಾಸ್ಯೆ.ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ.ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ.ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ ಕಾಳು .ಹಣಕೊಟ್ಟು ಖರೀದಿಸಿ ತರುತ್ತಾರೆ.ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ.ಬಣ್ಣಗಳ ಬ್ಯಾಗಡಿ ಚೂರು ,ಬಣ್ಣದಲ್ಲಿ ತೊಯಿಸಿದ ಜೋಳ.ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು,ಇಣಿಗವಚ,ಜೂಲು,ತೋಡೆ,ಗಂಟೆ ಸರಗಳಿಂದ ಸಿಂಗರಿಸುತ್ತಾರೆ.ಸಿಂಗರಿಸಿದ ಜೋಡೆತ್ತುಗಳನ್ನು ನೋಡುವದೇ ಒಂದು ಸೊಗಸು.ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆ ಹೆಣ್ಣು ಮಕ್ಕಳು ಹೋಳಿಗೆ,ಕಡಬು ಸವಿ ಸವಿ ಅಡುಗೆ ಸಿದ್ದಪಡಿಸಿತ್ತಾರೆ.ಮನೆಯ ದನಕರುಗಳನ್ನೂ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ.ಮಣ್ಣೆತ್ತುಗಳಿಗೆಕಾಯಿ,ಕರ್ಪೂರ,ಊದುಬತ್ತಿ,ಲೋಬಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವ ರಾಸಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅಪರ್ಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಲ್ಲಿ ದೇವರುಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ.ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆ ಮನೆ ತೆರಳಿ ಪೂಜಿತ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.
ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟುಕೊಂಡು ಮನೆ ಮನೆಗೆ ತೆರಳಿ ‘ಎಂಟತ್ತಿನ್ಯಾಗ ಒಂದ ಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿ’ ಎಂದು ತಿರುಗುತ್ತಾರೆ.ಮನೆಯವರು ಜೋಳ,ಗೋದಿ,ಸಜ್ಜೆ ,ಅಕ್ಕಿ ,ಹಣ ನೀಡಿ ಕಳಿಸುತ್ತಾರೆ.ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ವಿಭೂತಿ,ಟೆಂಗಿನಕಾಯಿ,ಬೆಲ್ಲ,ಚುರಮುರಿ ಖರೀದಿಸುತ್ತಾರೆ.ಎತ್ತುಗಳನ್ನು ತೆಗೆದುಕೊಂಡು ಹೊಳೆ,ಕೆರೆ,ಹಳ್ಳದ ದಂಡೆಗೆ ಹೋಗಿ ಅಲ್ಲಿ ಎಲ್ಲ ಮಣ್ಣೆತ್ತುಗಳಿಗೆ ಮುಖ ತೊಳೆದು ವಿಭೂತಿ,ಕುಂಕುಮ ಹಚ್ಚಿ ಉದುಬತ್ತಿ ಬೆಳಗಿ ಪಂಚ ಪಳಾರು ಹಾಕಿ,ಕಾಯಿ ಒಡೆದು ಕಾಲು ಮುಗಿದು ಊರ ಸಮೃದ್ಧಿಗೆ ಬೇಡಿಕೊಂಡು ಎತ್ತುಗಳನ್ನು ಹೊಳೆಗೆ ಬಿಡುತ್ತಾರೆ.ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರು ಹಂಚುತ್ತಾರೆ.ಇದು ಹಳ್ಳಿಯ ಮಕ್ಕಳ ಮಣ್ಣೆತ್ತಿನ ಅಮವಾಸ್ಯೆಯ ಸಂಭ್ರಮ. ಭೂತಾಯಿಗೆ ರೈತಾಪಿ ಜನ ಮಳೆ ಬೆಳೆ ಚೆನ್ನಾಗಿ ಆಗಲೆಂದು ಕೃಷಿ ವರ್ಷಾರಂಭದಲ್ಲಿ ಬೇಡಿಕೊಳ್ಳುವ ಹಬ್ಬವಾಗಿದೆ.
ಅರಳೆಲೆ ಬಸವನ ಪೂಜೆ :
ಉತ್ತರ ಕರ್ನಾಟಕದಲ್ಲಿ ಜ್ಯೇಷ್ಠ ಬಹುಳ ಅಮವಾಸ್ಯೆಗೆ ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯುತ್ತಾರೆ.ನಮ್ಮ ಹಳ್ಳಿಯ ಹೆಣ್ಣು ಮಕ್ಕಳು ಅರಳೆಲೆ ಬಸವನನ್ನು ಎಲೆಯ ಮಂಟಪದಲ್ಲಿ ಸಿಂಗಾರ ಮಾಡಿ ಊರ ಮಠದಲ್ಲಿಟ್ಟು ಪೂಜೆ ಮಾಡಿ ಹಾಡು ಹೇಳುತ್ತಾರೆ.ಕನ್ನಡದ ಮೊದಲ ಜಾನಪದ ಸಂಶೋಧನಾ ಪ್ರಬಂಧಕಾರ ಬಾದಾಮಿ ತಾಲೂಕು ಕೆರೂರಿನ ಡಾ.ಬಿ,ಎಸ್,ಗದ್ದಗಿಮಠರು ಸಂಗ್ರಹಿಸಿದ ಹೆಣ್ಣು ಮಕ್ಕಳು ಹಾಡುವ ಅರಳೆಲೆ ಬಸವನ ಪದ ಹೀಗಿದೆ.
ಒಂದು ಸುತ್ತಿನ ಕ್ವಾಟಿ
ಅದರೊಳು ಹೊಂದಿ ನಿಂತನು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಎರಡು ಸುತ್ತಿನ ಕ್ವಾಟಿ
ಅದರೊಳು ಸೊಡರು ತೂಗುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಮೂರು ಸುತ್ತಿನ ಕ್ವಾಟಿ
ಅದರೊಳು ಮೂರ್ತಗೊಂಡನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ನಾಲ್ಕು ಸುತ್ತಿನ ಕ್ವಾಟಿ
ಅದರೊಳು ನ್ಯಾಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಐದು ಸುತ್ತಿನ ಕ್ವಾಟಿ
ಅದರೊಳು ಐಕ್ಯಮೂರ್ತಿಯು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಆರು ಸುತ್ತಿನ ಕ್ವಾಟಿ
ಅದರೊಳು ಅರಳಿ ನಿಂತಾನ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಏಳು ಸುತ್ತಿನ ಕ್ವಾಟಿ
ಅದರೊಳು ಜಗವನಾಳುವ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಎಂಟು ಸುತ್ತಿನ ಕ್ವಾಟಿ
ಶಿವನಿಗೆ ಕಂಟಲೆತ್ತೇನೋ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಒಂಭತ್ತು ಸುತ್ತಿನ ಕ್ವಾಟಿ
ಅದರೊಳು ತುಂಬಿ ಬಂದಾನೊ ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ

ಹತ್ತು ಸುತ್ತಿನ ಕ್ವಾಟಿ
ಅದರೊಳು ಸುತ್ತ ನೋಡಲು ಬಸವ
ಬಸವಕ ಬಸವೆನ್ನಿರೆ
ಬಸವನ ಪಾದಕ ಶರಣನ್ನಿರೆ
ಹೀಗೆ ಹಾಡಿ ಬಸವನ ಪೂಜೆ ನೆರವೇರಿಸುತ್ತಾರೆ.


  • delicious
  • digg
  • facebook
  • reddit
  • stumble
  • twitter
  • rss

6 Comments

  • ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ,ಮೊ.9845500890 says:
    Your comment is awaiting moderation. 
    ಲೇಖನ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.
  • ರುದ್ರೇಶ ಕಿತ್ತೂರ says:
    ಉತ್ತಮ ಲೇಖನ , ಬಾಲ್ಯದ ನೆನಪು ಮರುಕಳಿಸಿದಕ್ಕೆ ಧನ್ಯವಾದಗಳು.
  • ಗೌರಿಪುರ ಚಂದ್ರು says:
    ಲೇಖನ ಚೆನ್ನಾಗಿದೆ. ಆದರೆ ಇದು ಬೋಧಿವೃಕ್ಷದಲ್ಲಿ ಪ್ರಕಟವಾದ ನಿಮ್ಮದೇ ಲೇಖನವಲ್ಲವೇ?
  • Gopaal Wajapeyi says:
    ನಾನು ಚಿಕ್ಕವನಿದ್ದಾಗ ಈ ಹಾಡು ಪದೇ ಪದೇ ಕಿವಿಗೆ ಬೀಳುತ್ತಿತ್ತು… ಈಗ ಮತ್ತೆ ಓಡಿಸಿದಿರಿ. ಎಷ್ಟು ಚಂದದ ಹಾಡು ! ಥ್ಯಾಂಕ್ಯೂ ಡಾ. ಪ್ರಕಾಶ್ ಖಾಡೆ…
  • ರಾಜೇಂದ್ರ ನಾಡಗೌಡ says:
    ಲೇಖನ ಹಳೆಯ ನೆನಪುಗಳನ್ನು ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು. ಮಣ್ಣೆತ್ತಿನ ಅಮವಾಸ್ಯ ಬಂತೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ , ಎತ್ತನ್ನು ಸಿಂಗರಿಸುವದು, ಎತ್ತುಗಳಿಗೆ ಬಣ್ಣ ಹಾಕುವದು,ಅವುಅಗಳಿಗೆ ತಿನ್ನಿಸುವದು, ಶಾಲೆಗೆ ಚಕ್ಕರ್ ಹಾಕುವದು. ಎತ್ತುಗಳ ಮುಕ್ಕಾಗದೆ ಇಟ್ಟು ಹೊಲದಲ್ಲಿ ಇಟ್ಟು ಬಂದರೆ ಮಳೆ ಬರುವದು ಇದನ್ನೆಲ್ಲ ನೆನೆದು ಸಂತಸವಾಯ್ತು.
  • pratibha kage says:
    chennagide sir

Saturday 15 March 2014

Holi : ಹೋಳಿ-ಡಾ.ಪ್ರಕಾಶ ಗ.ಖಾಡೆ

ನವ ವಸಂತ ತರುವ ಫಲವಂತಿಕೆಯ ಹೋಳಿ

ಡಾ ಪ್ರಕಾಶ ಗ ಖಾಡೆ

ವಸಂತ ಮಾಸದ ಸಂಭ್ರಮದ ಹಬ್ಬ ಹೋಳಿ.ಇದು ಫಲವಂತಿಕೆಯನ್ನು ವೃದ್ಧಿಸುವ ಹಾಗೂ ವರ್ಷವನ್ನು ಪುನಃಶ್ಚೇತನಗೊಳಿಸುವ ಹಬ್ಬ..ಹೋಳಿ ಹುಣ್ಣಿಮೆ ದಿವಸ ಕಾಮನ ಸುಂದರ ಪ್ರತಿಮೆ ಮಾಡಿಸಿ ,ಶೃಂಗರಿಸಿ ಊರಿನಲ್ಲಿರುವ ಕಾಮನ ಕಟ್ಟೆಯ ಮೇಲೆ ಹಂದರ ಕಟ್ಟಿ ಇಟ್ಟಿರುತ್ತಾರೆ.ಎಡಗಡೆ ಕಣ್ಣು ಮೂಗಿನಿಂದ ಚೆಲುವೆಯಾದ ಆಕರ್ಷಕ ಮೈಕಟ್ಟಿನ ರತಿದೇವಿಯ ಮೋಹಕ ಪ್ರತಿಮೆಯನ್ನು ಕೆಲವು ಕಡೆ ಇಡುವುದುಂಟು.ಕೆಲ ಊರುಗಳಲ್ಲಿ ಸರಕಾರಿ ಕಾಮಣ್ಣ ,ದೈವದ ಕಾಮಣ್ಣ ,ಓಣಿಯ ಕಾಮಣ್ಣ ಎಂದು ಮೂರು ಕಾಮಣ್ಣರನ್ನು ಪೂಜಿಸುತ್ತಾರೆ.ಸರಕಾರಿ ಕಾಮಣ್ಣನಿಗೆ ಊರ ದೈವದವರಿಂದ ,ಓಣಿಯ ಕಾಮಣ್ಣನಿಗೆ ಓಣಿಯ ಭಕ್ತರಿಂದ ಮಾನ ಮನ್ನಣೆ ದೊರೆಯುತ್ತದೆ.
ಕಾಮನ ಮುಂದೆ ಮಂಗಳವಾದ್ಯ ಬಾರಿಸುವ ,ಊದುವ ಸನಾದಿ ಅವರಿಗೆ ‘ಕಾಮನ ಮಾನೆ’ಗಳೆಂಬ ಭೂಮಿ ಉಂಬಳಿಯಾಗಿ ನೀಡಿದ ದಾಖಲೆಗಳಿವೆ. ಹೋಳಿ ಹಬ್ಬಕ್ಕೆ ದೊಡ್ಡ ಪರಂಪರೆ ಇದೆ.ಕಾಮನ ವಿಚಾರವಾಗಿ ಋಗ್ವೇದ ಅಥವಾ ವೇದಗಳಲ್ಲಿಯೂ ಉಲ್ಲೇಖವಿದೆ.ಸ್ಕಂದ ಪುರಾಣ ಮತ್ತು ಶಿವ ಪುರಾಣದಲ್ಲಿ ಕಾಮನ ಉಲ್ಲೇಖ ಬರುತ್ತದೆ.ಬುದ್ದನು ಕಾಮನನ್ನು ಗೆದ್ದ ವರ್ಣನೆಗಳು ಬೌದ್ದ ಸಾಹಿತ್ಯದಲ್ಲಿವೆ.ಪ್ರಸಿದ್ಧ ಸಂಸ್ಕೃತ ನಾಟಕಕಾರ ಕಾಳಿದಾಸ ತನ್ನ ಕಾವ್ಯದಲ್ಲಿ ಹೋಳಿಯನ್ನು ಉಲ್ಲೇಖಿಸಿದ್ದಾನೆ.ಪ್ರಾಚೀನ ಹಿಂದೂ ಧರ್ಮದ ಇತಿಹಾಸದಲ್ಲಿ ಹೋಳಿಯನ್ನು ವಿವರಿಸುವ ಅನೇಕ ಐತಿಹ್ಯಗಳಿವೆ.
ಹೋಳಿ ಕಥೆಗಳು :
1.ತುಂಬಿದ ಸಭೆಯಲ್ಲಿ ಶಿವ ಪಾರ್ವತಿಯನ್ನು ಲೋಕದಲ್ಲಿ ಸುಂದರನಾರು ಎಂದು ಕೇಳಿದಾಗ ಪಾರ್ವತಿಯು ‘ಕಾಮ’ ಎನ್ನುತ್ತಾಳೆ.ಶಿವನಿಗೆ ಸಿಟ್ಟು ಬಂದು ಕಾಮನನ್ನು ಉರಿಗಣ್ಣಿನಿಂದ ಸುಟ್ಟು ಬಿಡುತ್ತಾನೆ.ಆಗ ರತಿ ದುಃಖ ತಪ್ತಳಾಗುತ್ತಾಳೆ.ಅದನ್ನು ಕಂಡು ಶಿವ ಎಲ್ಲರ ಮನಸ್ಸಿನಲ್ಲಿ ನೆನೆದಾಗ ಕಾಮ ಹುಟ್ಟುತ್ತಾನೆ ಎಂದು ಸಮಾಧಾನ ಹೇಳುತ್ತಾನೆ.
2.ಹಬ್ಬ ಹುಣ್ಣಿವೆಗಳಲ್ಲಿ ಹೆಣ್ಣು ಆನಂದ ಪಡುವುದನ್ನು ಕಂಡು ಗಂಡು ದುಡಿಯುವ ತನಗೆ ಹಬ್ಬವಿಲ್ಲವೆಂದು ದೇವರ ಮೊರೆಹೊಕ್ಕಾಗ ,ಆಗ ದೇವರು ಇವರ ಮನವಿಯನ್ನು ಆಲಿಸಿ ಗಂಡು ಒಮ್ಮೆಯಾದರೂ ವರುಷದಲ್ಲಿ ನಕ್ಕಾಡಿ ಪ್ರಪಂಚ ಭಾರವನ್ನು ಮರೆಯಲೆಂದು ಆಡಲು ಹೋಳಿ ಹಬ್ಬವನ್ನು ದಯಪಾಲಿಸಿದನು.
3.ತನ್ನ ತಪಸ್ಸನ್ನು ಭಂಗಗೊಳಿಸಿದ ಉದ್ದೇಶದಿಂದ ಕಾಮನನ್ನು ಶಿವ ಮೂರನೆಯ ಕಣ್ಣಿನ ಜ್ವಾಲೆಯಿಂದ ಸುಟ್ಟದ್ದರದ್ಯೋತಕವಾಗಿ ಹೋಳಿಯನ್ನು ಆಚರಿಸುತ್ತಾರೆ.

ಹೋಳಿ ನಂಬಿಕೆಗಳು :
1.ಕಾಮನ ಕರಿ (ಬೇವಿನ ಹೂ ಚಿಗುರು, ಬೂದಿ)ಯಲ್ಲಿ ರೈತನಿಗೆ ಬಲವಾದ ನಂಬಿಕೆ .ಸುಡುವ ಕಾಲಕ್ಕೆ ಕಾಮನ ಬೂದಿ ಯಾವ ದಿಕ್ಕಿಗೆ ಹಾರುವುದೋ ಆ ಭಾಗ ಮಳೆ ಬೆಳೆಯಿಂದ ಸಮೃದ್ಧಿಯಾಗುವುದೆಂಬ ನಂಬಿಕೆ ಇದೆ.
2.ಮರುದಿನವೇ ಮಳೆಯಾಗಿ ಕಾಮನ ಬೂದಿ ನೆಲದೊಂದಿಗೆ ಬೆರೆತರೆ ಆ ನಾಡಿಗೆ ರೋಗ ರುಜಿನ ಬರಗಾಲದ ಭಯವಿರುವುದಿಲ್ಲ.
3.ಕಾಮನ ಬೂದಿಯನ್ನ ತಂದು ,ಬಿತ್ತು ಬೀಜಗಳಲ್ಲಿ ಬೆರೆಸಿದರೆ ಬೀಜ ಹುಸಿಯಾಗದೇ ನಾಟಿ ಬರುತ್ತದೆ.
4.ಕಾಮನ ಕರಿಯ ಸಂಕೇತವಾದ ಬೇವಿನ ಹೂ ಚಿಗುರನ್ನು ಕಾಳು ತುಂಬುವ ಚೀಲ,ಕಣ ರಾಶಿಗಳಲ್ಲಿ ಇಡುತ್ತಾರೆ.
5.ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಹೋಳಿ ಬೆಂಕಿ ಯಾವ ದಿಕ್ಕಿನಲ್ಲಿ ವ್ಯಾಪಿಸುತ್ತದೆ ಎಂಬುದನ್ನು ಆಧರಿಸಿ ಕಾಲಜ್ಞಾನವನ್ನು ನುಡಿಯಲಾಗುತ್ತದೆ.
6.ದಹನ ಕ್ರಿಯೆ ಮುಗಿದ ನಂತರ ಬೆಳಗು ಮುಂಜಾವಿನಲ್ಲಿ ಕಾಮನ ಬೆಂಕಿಯಿಂದಲೇ ಒಲೆ ಹೊತ್ತಿಸುವರು,ಕಡಲೆಯನ್ನು ಹುರಿದು ತಿನ್ನುವರು.ಇದರಿಂದ ಆಯುಷ್ಯ ಹೆಚ್ಚುವದೆಂಬ ನಂಬಿಕೆ ಇದೆ.


ಬಾಗಲಕೋಟೆ ಹೋಳಿ :
ಇಡೀ ದೇಶದಲ್ಲಿಯೇ ಬಾಗಲಕೋಟೆಯ ಹೋಳಿ ಆಚರಣೆಗೆ ಒಂದು ವಿಶಿಷ್ಟತೆ ಇದೆ.ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದರೆ,ಐದು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಬಾಗಲಕೋಟ ಎರಡನೆಯ ಸ್ಥಾನದಲ್ಲಿದೆ.ಬಾಗಲಕೋಟೆಯಲ್ಲಿಮೊದಲಿನಿಂದಲೂ ಮುಖ್ಯವಾಗಿ 5 ಪೇಟೆಗಳಿವೆ.ಕಿಲ್ಲಾ,ಹಳಪೇಟ,ಹೊಸಪೇಟ,ಜೈನಪೇಟ ಮತ್ತು ವೆಂಕಟಪೇಟ.ಮುಳುಗಡೆಯಿಂದ ಇವೆಲ್ಲ ಮೂಲ ಸ್ವರೂಪದಲ್ಲಿ ಉಳಿದಿಲ್ಲ.ಈ ಐದು ಓಣಿಗಳಿಗೆ ತುರಾಯಿ ಹಲಗೆ ಹಾಗೂ ಹಿಂದಿನ ಕಾಲದಿಂದ ಬಂದ ನಿಶಾನೆಗಳು ಇರುವವು.ಪ್ರತಿಯೊಂದು ಓಣಿಗಳಲ್ಲಿ ಹೋಳಿಹಬ್ಬದ ಬಾಬಿನ ಮನೆತನಗಳಿವೆ.ಮುಳುಗಡೆಯಿಂದ ಮಾಘ ಅಮವಾಸ್ಯೆಯ ಮರುದಿನದಿಂದಲೇ ಅಖಂಡ ಬಾಗಲಕೋಟೆಯ ಓಣಿ ಓಣಿಗಳಲ್ಲಿ ಹಲಗೆಯ ಸಪ್ಪಳ ಕೇಳಿ ಬರುತ್ತದೆ.ಬಾಗಲಕೋಟ ಹೋಳಿ ಹಬ್ಬದ ಅತಿ ಮುಖ್ಯ ಆಕರ್ಷಣೆ ಎಂದರೆ ‘ಸಂಪ್ರದಾಯ ತುರಾಯಿ ಹಲಗೆ ವಾದನ’ವಾಗಿದೆ.ತುರಾಯಿ ಹಲಗೆ ಎಂದರೆ ಸುಮಾರು ಹತ್ತು ಚಿಟ್ಟಲಿಗೆಗಳ ಒಂದು ಬೃಹತ್ ಆಕಾರದ ಹಲಗೆ.ಈ ಹಲಗೆಯ ಮೇಲೆ ಬಿರುದಾಗಿ ಚಿನ್ನದ ಇಲ್ಲವೇ ಬೆಳ್ಳಿಯ ಕಳಸ ಇರುತ್ತದೆ.ಇದಕ್ಕೆ ತುರಾಯಿ ಎನ್ನುತ್ತಾರೆ.ತುರಾಯಿ ಮೇಲುಗಡೆ ರಂಗು ರಂಗಿನ ಗುಚ್ಛವಿದ್ದು ರಾತ್ರಿ ಸಮಯದಲ್ಲಿ ವಿದ್ಯುದ್ದೀಪಗಳಿಂದ ಅಲಂಕರಿಸಿರುತ್ತಾರೆ.ಇದರ ಜೊತೆಗೆ ಅದರದೇ ಆದ ,ಹಿಂದಿನ ಕಾಲದಿಂದ ಬಂದ ರಂಗು ರಂಗಿನ ರೇಶ್ಮೆ ಬಟ್ಟೆಗಳ ಮೂವತ್ತು ಅಡಿ ಎತ್ತರದ ನಿಶಾನೆಗಳು ಇರುವವು.ಈ ನಿಶಾನೆಗಳು ಕೆಲವು ಹಿರಿಯರು ಪೇಶ್ವೆ ಮಹಾರಾಜರಿಂದಲೂ,ಇನ್ನೂ ಕೆಲ ಹಿರಿಯರು ವಿಜಾಪುರದ ಆದಿಲ್ ಶಾಹಿ ಸುಲ್ತಾನರಿಂದ ಬಂದವುಗಳಾಗಿವೆ.


ಹೋಳಿ ಹಬ್ಬದ ಸಂದರ್ಭದಲ್ಲಿ ಬಾಗಲಕೋಟೆಯಲ್ಲಿ ಹಲಗೆ ವಾದನ ಕೇಳುವುದೇ ಒಂದು ಸಂಭ್ರಮ.ಹಿರಿಕಿರಿಯರೆನ್ನದೇ ಎಲ್ಲ ವಯೋಮಾನದವರು ಇಲ್ಲಿ ಹಲಗೆ ನುಡಿಸುತ್ತಾರೆ.ಹಲಗೆವಾದನ ಪ್ರಾರಂಭವಾಗುವದು ಶಹನಾಯಿ ನುಡಿಸುವದರೊಂದಿಗೆ ಮುಖ್ಯ ಕಲಾವಿದನೊಬ್ಬ ದೊಡ್ಡ ಹಲಗೆಯನ್ನು ಹಿಡಿದು ನೃತ್ಯಕ್ಕೆ ಚಾಲನೆ ನೀಡುತ್ತಾನೆ.ಡಪ್ಪಿಗೆ ಸರಿಯಾಗಿ ಚಿಕ್ಕ ಹಲಗೆಯವರು ಪೆಟ್ಟು ಹಾಕುತ್ತಾರೆ.ಜತೆಗೆ ಡಗ್ಗಾ,ಝಮರಿ ಚಳ್ಳಮ,ಕಣಿಯ ವಾದಕರು ಕ್ರಮಬದ್ದ ಹೆಜ್ಜೆ ಹಾಕುತ್ತ ‘ಇನ್ನೂ ಯಾಕ ಬರಲಿಲ್ಲಾವ.. ಹುಬ್ಬಳ್ಳಿಯಾವ..’,'ಚೆನ್ನಪ್ಪ ಚೆನಗೌಡಾ’ ಎಂಬ ಸನಾದಿ ಸೂರಿನೊಡನೆ ತನ್ಮಯವಾಗಿ ಹರ್ಷದಿಂದ ಕುಣಿದು ಕುಪ್ಪಳಿಸುವರು.
ಕಾಮ ದಹನ :

ಬಾಗಲಕೋಟೆಯ ಹೋಳಿ ಆಚರಣೆಯ ಕಾಮದಹನ ಪ್ರಕ್ರಿಯೆಯು ಸಕಲ ಸಮುದಾಯದವರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಗುತ್ತದೆ.ಹೋಳಿಯ ದಿನ ಕಾಮನನ್ನು ಸುಡುವುದಕ್ಕಾಗಿ ಹುಡುಗರು ಓಣಿಯ ಮನೆಮನೆಯಲ್ಲೂ ಕಣ್ಣು ತಪ್ಪಿಸಿ ಕುಳ್ಳು,ಕಟ್ಟಿಗೆ,ನಿಚ್ಚಣಿಕೆ ಕದ್ದು ತಂದು ಒಂದೆಡೆ ಕೂಡಿಹಾಕುವ ಸಂಪ್ರದಾಯವಿದೆ.ಬಹುತೇಕ ಈ ಸಂಪ್ರದಾಯ ಮರೆಯಾಗಿದೆ.ಕೇಳಿ ಮತ್ತು ಕೊಂಡು ತಂದ ಕಟ್ಟಿಗೆ,ಕುಳ್ಳು ಮತ್ತು ಬಿದಿರುಗಳನ್ನು ರಾಶಿಗಟ್ಟಲೇ ಹೇರಿ ಅದರ ನಡುವೆ ಕಾಮನ ಚಿತ್ರ ಬರೆದು ಚಿತ್ರವನ್ನು ಕೋಲಿಗೆ ಅಂಟಿಸಿ ಕಾಮನಿಗೆ ಪೂಜೆ ಸಲ್ಲಿಸಿ ದಹಿಸಲು ಸಿದ್ದರಾಗುತ್ತಾರೆ.ನಂತರ ಹಲಗೆ ಮೇಳದೊಂದಿಗೆ ನಿಶಾನೆ ಹಾಗೂ ಚಲುವಾದಿ ಬಟ್ಟಲುದೊಂದಿಗೆ ಓಣಿಯ ಶೆಟ್ಟರನ್ನು ಕರೆದುಕೊಂಡು ದಲಿತರ ಓಣಿಗೆ ಹೋಗಿಅಲ್ಲಿ ಖಾತೆದಾರರ ಮನೆಯಲ್ಲಿ ವೀಳ್ಯದೆಲೆ,ಅಡಿಕೆಯನ್ನು ಕೊಟ್ಟು ಅವರನ್ನು ಆಮಂತ್ರಿಸುವ ಸಂಪ್ರದಾವಿದೆ.ಆಚರಣೆಯ ಬಾಬುದಾರರಾದ ಖಾತೆದಾರರ ಮನೆಯಿಂದಲೇ ಬೆಂಕಿ ತಂದು ಕಾಮದಹನ ಮಾಡಲಾಗುತ್ತದೆ.ನಸುಕಿನ ಜಾವದಿಂದ ಆರಂಭವಾದ ಕಾಮದಹನವು ರಾತ್ರಿಯವರೆಗೂ ನಗರದ ವಿವಿಧ ಓಣಿ ಮತ್ತು ಬಡಾವಣೆಗಳಲ್ಲಿ ಪ್ರಮುಖ ಕಾಮಣ್ಣರ ದಹನ ನಡೆಯುತ್ತದೆ.ಮೊದಲು ಹೊತ್ತಿಸಿದ ಬೆಂಕಿಯನ್ನೇ ಎಲ್ಲರೂ ತಂದು ಕಾಮದಹನ ಮಾಡುವುದು ವಿಶೇಷ.ಕಾಮನನ್ನು ಸುಟ್ಟ ದಿವಸ ಅದೇ ಬೂದಿಯಿಂದಲೇ ದೊಡ್ಡವರು ಸಣ್ಣವರೆನ್ನದೇ ಬೂದಿ ಆಟವಾಡುತ್ತಾರೆ.
ಬಣ್ಣದ ಬಂಡಿಗಳು :

ಬಾಗಲಕೋಟೆ ಹೋಳಿಯ ಮುಖ್ಯ ಆಕರ್ಷಣೆ ಬಣ್ಣದ ಬಂಡಿಗಳು.ನೂರಾರು ಎತ್ತಿನ ಗಾಡಿಗಳಲ್ಲಿ ದೊಡ್ಡ ಹಂಡೆಗಳಲ್ಲಿ ಬಣ್ಣ ತುಂಬಿಕೊಂಡುಬಣ್ಣವಾಡುವುದನ್ನು ನೋಡಿ ಕಣ್ತುಂಬಿಕೊಳ್ಳುವುದೇ ಜೀವನದ ಒಂದು ಸಾರ್ಥಕ ಭಾವ.ಬಣ್ಣವಾಡಲು ಇತ್ತೀಚಿಗೆ ಎತ್ತಿನ ಬಂಡಿಗಳ ಬದಲು ಟ್ರ್ಯಾಕ್ಟರ್,ಟ್ರಕ್ಕುಗಳನ್ನು ಉಪಯೋಗಿಸುತ್ತಿದ್ದಾರೆ. ಒಂದೊಂದು ಓಣಿಯವರು ಕನಿಷ್ಟ ಐವತ್ತರಿಂದ ಅರವತ್ತು ಎತ್ತಿನ ಗಾಡಿಗಳಲ್ಲಿ ,ಒಂದೊಂದು ಗಾಡಿಗಳಲ್ಲಿ ನಾಲ್ಕಾರು ಹಂಡೆ,ಇಲ್ಲವೇ ಬ್ಯಾರಲ್ಲುಗಳನ್ನಿಟ್ಟು ಅವುಗಳ ತುಂಬ ಬಣ್ಣ ತುಂಬಿ ಕೇಕೇ ಹಾಕುತ್ತಾ ಹಾದಿ ಬೀದಿಯಲ್ಲಿ ನೆರೆದ ಜನರಮೇಲೆ ಬಣ್ಣ ಎರಚುತ್ತಾರೆ.ಒಂದೊಂದು ಓಣಿಗಳಲ್ಲಿ ಬಂಡಿಯ ಬಣ್ಣದಾಟಕ್ಕೆ ದಿನವನ್ನು ಗೊತ್ತುಮಾಡಲಾಗಿರುತ್ತದೆ.ಹಾಗಾಗಿ ಹಬ್ಬದ 5 ದಿನಗಳ ಕಾಲ ಬಾಗಲಕೋಟೆಯ ಮಾರುಕಟ್ಟೆಯು ಸ್ವಯಂಘೋಷಿತ ಬಂದ್ ಆಗುವದರಿಂದ ವ್ಯಾಪಾರಸ್ಥರು ಇದೇ ವೇಳೆಯಲ್ಲಿಯೇ ಕುಟುಂಬ ಸಮೇತರಾಗಿ ದಕ್ಷಿಣ ಇಲ್ಲವೆ ಉತ್ತರ ಭಾರತ ಪ್ರವಾಸ ಹೋಗಿಬಿಡುತ್ತಾರೆ.ನೌಕರರು ಗೋವ ಮೊದಲಾದ ಬೀಚ ಕಡೆಗೆ ಮುಖ ಮಾಡುತ್ತಾರೆ.ಹೀಗೆ ಸಂಭ್ರಮದ ಹಬ್ಬದಲ್ಲಿ ಊರುಬಿಟ್ಟು ಹೋಗುವ ಮಂದಿಗೆ ಹಾಡಿನಲ್ಲಿಯೇ ಹೀಗೆ ವಿನಂತಿಸಿಕೊಳ್ಳುತ್ತಾರೆ.
ಮುತ್ತು ಮಾಣಿಕ್ಯ ಬೇಡ,ಮತ್ತೆ ಸಂಪದ ಬೇಡ
ಹೋಳಿಹಬ್ಬದ ವೈಭವ ಬೇಡನ್ನಬೇಡ ಅಣ್ಣಯ್ಯ .
ಎಂದು ಗೋಗರೆಯುತ್ತಾರೆ. ಇತ್ತೀಚಿಗೆ ಹೆಣ್ಣು ಮಕ್ಕಳೂ ಗುಂಪು ಗುಂಪಾಗಿ ಮನೆಮನೆಗಳಿಗೆ ತೆರಳಿ ಬಣ್ಣವಾಡುವ ಸಂಪ್ರದಾಯ ಬೆಳೆದು ಬಂದಿದೆ.
ಸೋಗಿನ ಬಂಡಿಗಳು :
ಬಾಗಲಕೋಟ ಹೋಳಿ ಆಚರಣೆಯ ಸಂದರ್ಭದ ಸೋಗಿನ ಬಂಡಿಗಳು ಭಾರತೀಯ ಪರಂಪರೆಯ ಸಂಸ್ಕೃತಿಯ ಅನಾವರಣಕ್ಕೆ ಸಾಕ್ಷಿಯಾಗಿವೆ.ರಾಮಾಯಣ,ಮಹಾಭಾರತದ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ವೇಷ ತೊಟ್ಟು ಬಂಡಿಗಳಲ್ಲಿ ಬಂದು ಪ್ರದಶರ್ಿಸುವ ‘ಸೋಗಿನ ಬಂಡಿಗಳು’ ಬಾಗಲಕೋಟ ಹೋಳಿಗೆ ವಿಶೇಷ ಕಳೆ ಕಟ್ಟುತ್ತವೆ.ಓಕಳಿಯಾಟದಂತೆ ಒಂದೊಂದು ಓಣಿಯವರು ಸೋಗಿನ ಬಂಡಿಗಳ ಪ್ರದರ್ಶನ ಮಾಡುವುದು ಮೊದಲಿನಿಂದಲೂ ಬೆಳೆದು ಬಂದಿದೆ.ಪೌರಾಣಿಕ,ಐತಿಹಾಸಿಕ ,ಸಾಮಾಜಿಕ, ರಾಜಕೀಯ, ಹಾಗೂ ವಿಡಂಬನಾತ್ಮಕ ಸೋಗಿನ ಬಂಡಿಗಳು ಸ್ಥಬ್ಧ ಚಿತ್ರಗಳ ಹಾಗೆ ರಾರಾಜಿಸುತ್ತವೆ.ಬಣ್ಣದ ದಿನದ ರಾತ್ರಿ ಸೋಗಿನ ಬಂಡಿಯಿಂದ ಹಳೆ ಬಾಗಲಕೋಟೆ ಮಾರುಕಟ್ಟೆ ಪ್ರದೇಶ ವಿಜೃಂಬಿಸುತ್ತದೆ.ರಾತ್ರಿಯಾಗುತ್ತಿದ್ದಂತೆ ಜನರ ಕುತೂಹಲ ಕೆರಳುತ್ತದೆ.ಪೌರಾಣಿಕ ಸನ್ನಿವೇಶಗಳಾದ ರಾಮನ ಪಟ್ಟಾಭೀಷೇಕ,ದ್ರೌಪದಿಯ ವಸ್ರಾಪಹರಣ,ಸೀತೆ ಅಶೋಕವನದಲ್ಲಿರುವಾಗ ಮಾರುತಿ ಉಂಗುರ ಕೊಟ್ಟ ಸನ್ನಿವೇಶ ಮೊದಲಾವನ್ನು ಶ್ರೀಮಂತ ವೇಷಭೂಷಣ ತೊಟ್ಟು ,ಪಾತ್ರಗಳನ್ನು ಹಾಕಿ ಸಂಭ್ರಮಿಸುತ್ತಾರೆ.
ಸೋಗಿನ ಬಂಡಿಗೆ ಸುಂದರವಾದ ಕಟೌಟುಗಳನ್ನು ಮಾಡಿ ಅವುಗಳಲ್ಲಿ ಪ್ರಮುಖ ಪಾತ್ರಗಳನ್ನು ವೇಷಭೂಷಣಗಳಿಂದ ಅಲಂಕರಿಸುತ್ತಾರೆ.ವೇಷಭೂಷಣಗಳನ್ನು ತಯಾರಿಸಿಕೊಡುವ ಇಲ್ಲವೇ ಬಾಡಿಗೆ ಕೊಡುವ ಕೆಲ ಪ್ರಸಿದ್ದ ಮನೆತನಗಳು ಇಲ್ಲಿವೆ.ಬಾಗಲಕೋಟೆಯ ಪ್ರಖ್ಯಾತ ಕಲಾವಿದರಾದ ನಾವಲಗಿ ಹಾಗೂ ಶಿವಪ್ಪ ಕರಿಗಾರ ಅವರು ಸುಂದರವಾದ ಕಟೌಟ ಮಾಡುವುದರಲ್ಲಿ ಸಿದ್ಧಹಸ್ತರು.ಶಿಂಗಣ್ಣ ರೊಳ್ಳಿ ಮನೆತನದವರು ವೇಷ ಹಾಕಿದವರ ಮುಖಕ್ಕೆ ಬಣ್ಣ ಹಚ್ಚುವ ಪ್ರಸಾಧನ ಕಲೆಯಲ್ಲಿ ಖ್ಯಾತಿ ಪಡೆದಿದ್ದಾರೆ.
ಕಾಮದಹನ,ಬಣ್ಣದ ಬಂಡಿ,ಸೋಗಿನ ಬಂಡಿ ಈ ಎಲ್ಲ ಆಚರಣೆಗಳೊಂದಿಗೆ ವಿವಿಧ ಬಡಾವಣೆಗಳಲ್ಲಿ ‘ಹಲಗೆ ಮೇಳ’ಗಳು ನಡೆಯುತ್ತವೆ.ಸ್ಪಧರ್ಾತ್ಮಕವಾಗಿ ನಡೆಯುವ ಮೇಳಗಳಿಗೆ ಬಹುಮಾನ ನೀಡಲಾಗುತ್ತದೆ.ವಿವಿಧ ವೇಷ ಭೂಷಣಗಳಿಂದ ಕೂಡಿ ತಾಳಕ್ಕೆ ತಕ್ಕಂತೆ ಕುಣಿತ,ಸಂಪ್ರದಾನಿ ವಾದ್ಯದೊಂದಿಗೆ ನೋಡುಗರಿಗೆ ಮುದ ನೀಡುತ್ತಾರೆ.ಮುಳುಗಡೆಯ ಬಾಗಲಕೋಟೆಯಲ್ಲಿ ಯಾವ ಹಬ್ಬದಾಚರಣೆಗಳೂ ಮುಳುಗಿ ಹೋಗದಂತೆ ಹಿಂದಿನ ವೈಭವವನ್ನು ಕಾಯ್ದುಕೊಂಡು ಬರುವಲ್ಲಿ ಇಲ್ಲಿನ ಹಿರಿಯರ ಮತ್ತು ಯುವ ಸಮುದಾಯದವರ ಪಾತ್ರ ದೊಡ್ಡದು.ನಗರದ ಬಾಗಲಕೋಟ ಹೋಳಿ ಆಚರಣಾ ಸಮಿತಿ,ಮಹಾತ್ಮ ಗಾಂಧಿ ರಸ್ತೆ ವರ್ತಕರ ಸಂಘ,ಜ್ಯೋತಿಪ್ರಕಾಶ ಸಾಳುಂಕೆ ಅಭಿಮಾನಿಗಳ ಗೆಳೆಯರ ಬಳಗ,ಕಿಲ್ಲಾಗಲ್ಲಿ,ವಿದ್ಯಾಗಿರಿ,ನವನಗರಗಳ ಗೆಳೆಯರ ಬಳಗ,ಸುಭಾಶಚಂದ್ರ ಭೋಸ ಯುವಕ ಸಂಘ ಹೀಗೆ ಪ್ರತಿಯೊಂದು ಬಡಾವಣೆಗಳಲ್ಲೂ ಗೆಳೆಯರ ಬಳಗ ಕಟ್ಟಿಕೊಂಡು ಬಾಗಲಕೋಟೆ ಹೋಳಿ ಆಚರಣೆಯ ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಕೀತರ್ಿ ಇಲ್ಲಿ ಮುಳುಗಡೆಯೊತ್ತರ ಬಾಗಲಕೋಟೆಯ ಸಮಸ್ತ ಜನತೆಗೆ ಸಲ್ಲುತ್ತದೆ.ಒಟ್ಟಾರೆ ಬಡವ ,ಶ್ರೀಮಂತವೆನ್ನದೇ ಜಾತಿ,ಮತ,ಪಂಥಗಳನ್ನು ಮರೆತು ಮೇಲು ಕೀಳು ಎಂಬ ಮತೀಯ ಭಾವನೆಗಳನ್ನು ತೊರೆದು ಆಚರಿಸುವ ಭಾವೈಕ್ಯದ ಸಂಕೇತವಾದ ಹೋಳಿ ಹಬ್ಬವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.

ಹೋಳಿ ಹಾಡುಗಳು :
ಯಾಲಕ್ಕಿ ಎಲಿ ಸಣ್ಣ ಜೀರಗಿ ಮೆಂತೆವ ಸಣ್ಣ
ನೀರಿಗಿ ಹೋಗುವವಳ ನಡುಸಣ್ಣ
ನಮ್ಮ ಬಸವಣ್ಣನ ಹೆಗಲ ಮ್ಯಾಗಿರುವ ನೊಗ ಸಣ್ಣ.


ಹತ್ತೀಯ ಹೊಲಕಂತ ಹೊತ್ತಾಳ ಬಿಂದಿಗಿ
ಕಸ್ತೂರಿಯಂಥ ಕರಿ ಹುಡುಗಿ
ಕಸ್ತೂರಿಯಂಥ ಕರಿಹುಡುಗಿಯ ಸಲುವಾಗಿ
ಒತ್ತೀ ಬಿದ್ದಾವ ಹೊಲಮನಿಯ.

ಹಲ್ಲಿ ಕಡಬ ಮಾಡಿ ವಲ್ಲಿ ಪದರೀಗಿ ಕಟ್ಟಿ
ಬೆಲ್ಲಿಲ್ಲ ಗೆಳೆಯಾ ಬೈಬ್ಯಾಡ
ಬೆಲ್ಲಿಲ್ಲಂತ ಬೈಬ್ಯಾಡ ಗೆಳೆಯಾ
ನಿನ್ನ ಗಲ್ಲಕ್ಕ ಕೊಟ್ಟ ಬೆಲ್ಲ ಮರಿಬ್ಯಾಡ.
ನತ್ತನ್ನ ಇಟ್ಟಾಳ ನಲಿನಲಿದ ನಗತಾಳ
ನಗುವ ಹುಡುಗಿಯ ಕಂಡ-ಹುಡುಗ
ಹಿತ್ತಲ ಬೇಲಿ ಜಿಗಿದಾನ
ಹಿತ್ತಲ ಜಿಗಿಬ್ಯಾಡ ಕೈಕಾಲ ಮುರಕೊಬ್ಯಾಡ
ಸುತ್ತಾಡ ಬಾರ ನನ್ನ ಸುಬೇದಾರ-ಚೆಲುವಾ
ಸುತ್ತಾಕ ಕೊಡತಿನಿ ಪಟಗಾವ.
ಒಟ್ಟಾರೆ ಹೋಳಿ ಆಚರಣೆಯು ವಸಂತ ಮಾಸದಲ್ಲಿ ಮಾನವರನ್ನು ಹೊಸ ಮನುಷ್ಯರನ್ನಾಗಿ ರೂಪಿಸುವ ಚೆಲುವಾದ ಹಬ್ಬ.
-ಡಾ.ಪ್ರಕಾಶ ಗ.ಖಾಡೆ ,ನವನಗರ,ಬಾಗಲಕೋಟ
Dr.Prakash G.Khade,M.A.Ph.d.
Bagalkot-587103.
Mo. 9845500890

Friday 7 February 2014

ಬೇಂದ್ರೆ ಕಾವ್ಯ ಮತ್ತು ಜಾನಪದ -ಡಾ.ಖಾಡೆ

      • ದ.ರಾ.ಬೇಂದ್ರೆ ಅವರ ಕಾವ್ಯ ಮತ್ತು ಜಾನಪದ
        ************************
        -ಡಾ.ಪ್ರಕಾಶ ಗ.ಖಾಡೆ

        ಅಂಬಿಕಾತನಯದತ್ತ ಕಾವ್ಯನಾಮದಿಂದ ಜನಮಾಸದಲ್ಲಿ ಅಚ್ಚಳಿಯದೇ ಉಳಿದ ವರಕವಿ ದ.ರಾ. ಬೇಂದ್ರೆಯವರ ಕವಿತೆಗಳ ಮೋಹಕತೆಗೆ ಇರುವುದು ಪ್ರಾಸ ಪದಗಳ ಬಳಕೆಯಲ್ಲಿ. ಇದು ಜನಪದ ಭಾಷೆಯನ್ನು ಅವರು ಉಪಯೋಗಿಸಿಕೊಂಡುದರ ಪರಿಣಾಮವಾಗಿದೆ. ಒಂದು ಭಾಷೆಯ ಶಬ್ದಸಂಪತ್ತು, ನುಡಿಗಟ್ಟು ಹೆಚ್ಚಾಗಿದ್ದಷ್ಟು ಇಂಥ ಸಾಧ್ಯತೆಗಳೂ ಹೆಚ್ಚು. ಇಲ್ಲಿ ಭಾಷೆಯನ್ನು ಇಡಿಯಾಗಿ, ಅದರ ಎಲ್ಲ ಪ್ರಭೇದಗಳೂ ಸೇರಿದಂತೆ, ತೆಗೆದುಕೊಂಡ ಕವಿಗೆ ಇರುವಷ್ಟು ಶ್ರೀಮಂತಿಕೆ, ತನ್ನನ್ನು ಯಾವುದೋ ಒಂದು ಸೀಮೆಗೆ ಸೀಮಿತಗೊಳಿಸಿಕೊಂಡ ಕವಿಗೆ ಇಲ್ಲ. ಎಂದರೆ ಮಡಿವಂತಿಕೆಯನ್ನು ಬಿಟ್ಟುಕೊಟ್ಟ ಲೇಖಕನ ವ್ಯಾಪ್ತಿ ಸಹಜವಾಗಿ ಹೆಚ್ಚು. ಇದಕ್ಕೆ ಇನ್ನೊಂದು ರೀತಿಯಲ್ಲಿ ಆಂಡಯ್ಯನ ‘ಕಬ್ಬಿಗರ ಕಾವಂ’ ಒಂದು ಉದಾಹರಣೆ. ಶುದ್ಧ ಕನ್ನಡದಲ್ಲೇ ಬರೆಯುತ್ತೇನೆಂದು ಹೊರಟ ಆಂಡಯ್ಯನ ಭಾಷೆ ಅದರ ಕಸುವನ್ನು ಕಳೆದುಕೊಂಡಿತು. ಬೇಂದ್ರೆ ತಮ್ಮ ಕಾವ್ಯಕ್ಕೆ ಜನಪದವನ್ನು ಉಪಯೋಗಿಸಿಕೊಂಡರು ಎನ್ನುವುದಕ್ಕಿಂತಲೂ ಅವರು ಭಾಷೆಯ ಉಪಯೋಗಗಳಲ್ಲಿ ಎಲ್ಲ ಮಡಿವಂತಿಕೆಯನ್ನು ದಿಕ್ಕರಿಸಿದರು ಎನ್ನುವುದೇ ಹೆಚ್ಚು ಸೂಕ್ತವೆಂದು ತೋರುತ್ತದೆ ಎನ್ನುತ್ತಾರೆ ಕೆ.ವಿ.ತಿರುಮಲೇಶ್. ಶಿಷ್ಟಪದಗಳ ಜತೆ ಜತೆಯಲ್ಲೆ ಗ್ರಾಮ್ಯಪದಗಳೂ, ಮಾರ್ಗಶೈಲಿಯ ಜತೆಗೇ ದೇಸೀಯೂ ಅವರ ಕವಿತೆಗಳಲ್ಲಿ ಕಂಡು ಬರುತ್ತವೆ. ಒಂದು ಸ್ತರದಿಂದ ಇನ್ನೊಂದು ಸ್ತರಕ್ಕೆ ದಾಟುವುದು ಮಾತ್ರವಲ್ಲ, ಒಮ್ಮೆಲೆ ಎರಡೂ ಸ್ತರಗಳಲ್ಲಿ ಸಾಗುವುದು ಕೂಡ ಬೇಂದ್ರೆಯವರಿಗೆ ಸಾಧ್ಯವಾಯಿತು.
        ಹರಗೋಣ ಬಾ ಹೊಲ ಹೊಸದಾಗಿ
        ಬಿದ್ದದ ಹ್ಯಾಗೋ ಕಾಲ್ ಕಸವಾಗಿ
        ನಂಬಿಗೀಲೆ ದುಡಿತಾನ ಬಸವಣ್ಣಾ
        ನಂಬಿಗ್ಯಾಗೈತಿ ಅವನ ಕಸುವಣ್ಣಾ
        ಕಸುವೀಲೆ ಬೆಳೆಸೋಣ ಎತ್ತಗೋಳು
        ಎತ್ತಲ್ಲ ಅವು ನಮ್ಮ ಮುತ್ತಗೋಳು
        ಇಲ್ಲಿನ ಪ್ರಾಸದ ರೀತಿ ಸಹಜವಾಗುವುದು. ಬೇಂದ್ರೆಯವರ ಕಾವ್ಯದ ಮಾಂತ್ರಿಕತೆ ಇರುವುದೇ ಪ್ರಾಸದಲ್ಲಿ ತೋರುವ ವಿಶಿಷ್ಟ ರಚನಾಶಕ್ತಿಯಲ್ಲಿ. ಅವರ ಕಾವ್ಯ ಬಿಚ್ಚಿಕೊಳ್ಳುತ್ತ ಹೋಗುವ ಹೊಸ ಹೊಸ ಪದಗಳ, ವಾಕ್ಯಗಳ ರಚನಾ ಕೌಶಲವೇ ಒಂದು ಆಕರ್ಷಣೀಯವಾದುದು.ತಿರುಮಲೇಶರು ಹೇಳುವ ಹಾಗೆ ಬೇಂದ್ರೆಯವರಿಗೆ ಪದಗಳೆಂದರೆ ಬಾಗಿಲ ಹಾಗೆ, ಒಂದೊಂದು ಪದವನ್ನು ತೆಗೆಯುವಾಗಲೂ ಅವರು ಒಂದೊಂದು ಬಾಗಿಲನ್ನು ತಟ್ಟುವಂತೆ ತೋರುತ್ತದೆ. ಆದ್ದರಿಂದಲೆ ಬೇಂದ್ರೆಯವರ ಕವಿತೆಗಳನ್ನೋದುವುದೆಂದರೆ ಒಂದು ಬೆಳೆಕಿನ ಲೋಕವನ್ನು ಹೊಕ್ಕಂತೆ. ಬೇಂದ್ರೆ ಮಾತುಗಾರರು, ಮಾತಿಗೆ ಮಾತು ಜೋಡಿಸುವುದೆಂದರೆ ಅವರಿಗೆ ಪ್ರಿಯವಾದ ಸಂಗತಿ, ಆದರೆ ‘ಶಬ್ದ ಶ್ರುತಿಯಾದಾಗ ಮಾತು ಕೃತಿಯಾದೀತು’ ಎಂದು ಹೇಳಿದವರೂ ಅವರೇ, ಕೃತಿಯಲ್ಲಿ ತೋರಿಸಿ ಕೊಟ್ಟವರೂ ಅವರೆ. ಪ್ರಾಸಕ್ಕೆ ಪ್ರಾಸ ಸೇರಿಸುತ್ತ ಅವರು ಶಬ್ದಗಳ ಬೆನ್ನು ಹತ್ತುತ್ತಾರೆ. ಜನಪದರ ನುಡಿಗಟ್ಟು, ಮಾತಿನ ಶಕ್ತಿ ಇದನ್ನು ಬೇಂದ್ರೆಯವರಲ್ಲಿ ರೂಪಿಸಿದೆ.
        ಗಳ ಗಳ ಗಾಳಿಯು ಜಳ ಜಳ ನೀರಾಗ
        ಸುಳಿ ಸುಳಿದು ಬಂದು ನೀರಾಟ – ಆಡುತಲೆ
        ಒಲಿದೊಲಿದ ನೀರು ತೆರಿತೆರಿ
        ತ್ರಿಪದಿಯಲ್ಲಿ ದಟ್ಟವಾಗಿ ಸುಳಿದುಕೊಳ್ಳುವ ಪ್ರಾಸ ಪದಗಳು ಉಂಟು ಮಾಡುವ ಅರ್ಥವಂತಿಕೆಯೇ ಬೇಂದ್ರೆ ಅವರ ಕಾವ್ಯದ ಜೀವಾಳ. ಶಬ್ದವನ್ನು ಅದರ ವಿಶಿಷ್ಟ ನಾದದ ಮೂಲಕ ಕುಣಿಸುವ ಬೇಂದ್ರೆಯವರ ಕಾವ್ಯಶಿಲ್ಪ ಕನ್ನಡ ಜನಪದವನ್ನು ಮೂರ್ತಿಕರಿಸಿದೆ.
        ಓ ಆಷಾಢಾ ಆಷಾಢಾ
        ಆಡಿಸ್ಯಾಡ ಬ್ಯಾಡಾ
        ………………
        ಹುಲಗಲದಾಗ ಗಿಲೀಗಿಲೀ ಅಂತಾವ |
        ಗಿಲಗಂಚೀಕಾಯಿ
        ಹೊಟ್ಟಿಯೊಳಗ ಹೂರಣಿಲ್ಲಾ | ಬಿಡತಾವೋ ಬಾಯಿ

        ಹುಲಗಲ, ಗಿಲೀ ಗಿಲೀ, ಗಿಲಗಂಚಿ, ಆಷಾಢ, ಆಡಿಸಬ್ಯಾಡ ಈ ಪದಗಳೆಲ್ಲ ಬೇಂದ್ರೆಯವರ ಜಾನಪದ ಮಾಂತ್ರಿತೆಯಿಂದ ರೂಪಿತವಾದವು. ಹಳ್ಳಿಗರ ನಿತ್ಯದ ಬದುಕಿನಲ್ಲಿ ನಡೆಯುವ ಸಂದರ್ಭಗಳನ್ನು ಇವು ಕಟ್ಟಿಕೊಡುತ್ತವೆ. ಮಳೆಬಾರದೆ ರೈತರ ಕುಟುಂಬಗಳು ಅನುಭವಿಸುವ ಯಾತನೆಯನ್ನು ‘ಗಿಲಗಂಚೀಕಾಯಿಯ’ ಅನುಪಯುಕ್ತ ಸಪ್ಪಳ ಹಸಿದ ಹೊಟ್ಟೆಯನ್ನು ಅಣಕಿಸುವಂತಿದೆ.ಆದಿ ಪ್ರಾಸ, ಅಂತ್ಯ ಪ್ರಾಸವೆನ್ನದೇ ಬೇಂದ್ರೆಯವರು ಪದಪದಕ್ಕೂ ಸಾಲು ಸಾಲಿಗೂ ರೂಪಿಸಿದ ಪ್ರಾಸದ ಸೃಷ್ಟಿ ಜನಪದರ ಹಾಡುಗಳಿಂದ ಪಡೆದ ಕಾಣ್ಕೆಯಾಗಿದೆ. ‘ಜನುಮದ ಜಾತ್ರಿ’ ಕವಿತೆಯ ತ್ರಿಪದಿಗಳು ತುಂಬಿಕೊಂಡು ಬಂದ ಪ್ರಾಸ ಪದಗಳು ಗ್ರಾಮೀಣರ ಪದಸಂಪತ್ತಿನ ಆಗಾಧತೆಗೆ ಸಾಕ್ಷಿಯಾಗಿವೆ.
        ನೇತ್ರ ಪಲ್ಲವಿಯಿಂದ ಸೂತ್ರಗೊಂಬೀ ಹಾಂಗ
        ಪಾತ್ರ ಕುಣಿಸ್ಯಾನ ಒಲುಮೀಗೆ ದಿನ – ದಿನ
        ಜಾತ್ರೆಯೆನಿಸಿತ್ತು ಜನುಮವು
        ಹುಬ್ಬು ಹಾರಿಸಿದಾಗ ಹಬ್ಬ ಎನಿಸಿತು ನನಗ
        ‘ಅಬ್ಬ’ ಎನಬೇಡ ನನ ಗೆಣತಿ – ಸಾವಿರಕ
        ಒಬ್ಬ ನೋಡವ್ವ ನನನಲ್ಲನಲ್ಲ
        ನಲ್ಲೆಯರ ಜೀವನ ದಿನ ದಿನವೂ ಜಾತ್ರೆಯ ಸಡಗರ, ಸಂಭ್ರಮಗಳಿಂದ ಕೂಡಿರಲಿ ಎಂಬುದು ಕವನದ ಆಶಯ. ‘ಸಾವಿರಕ ಒಬ್ಬ ನೋಡವ್ವ ನನನಲ್ಲ’ ಎಂದು ನಲ್ಲೆ ತನ್ನ ಗೆಳತಿಗೆ ಹೇಳುವಲ್ಲಿ ಅವರ ಜೀವನದ ಸಾಮೀಪ್ಯ ಅಡಗಿದೆ. ತ್ರಿಪದಿ ರೂಪದ ಈ ಕವಿತೆ ಗ್ರಾಮೀಣದ ನಿರ್ಮಲ ಪ್ರೇಮ ಬದುಕನ್ನು ಚಿತ್ರಿಸುತ್ತದೆ. ಬೇಂದ್ರೆಯವರ ‘ನಗೀ ನವಿಲು’ ಅತ್ಯಂತ ಜನಪ್ರಿಯವಾದ ಕವಿತೆ. ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ 1929ರಲ್ಲಿ ಬರೆದ ಈ ಕವಿತೆ ‘ಗರಿ’(1932)ಯಲ್ಲಿ ಪ್ರಕಟವಾಗಿದೆ. ಕಲಘಟಗಿ ಅತ್ಯಂತ ಬೆಳೆಯುಳ್ಳ ಪ್ರದೇಶ. ಅಲ್ಲಿ ಒಮ್ಮೆ ಬರಗಾಲ ಬಿದ್ದಾಗ, ಜನರ ತೊಳಲಾಟ ಕಂಡು, ಅನ್ನ ಸಿಗದೆ ದುಃಖ ಅನುಭವಿಸುತ್ತ ಇರುವ ಸಂದರ್ಭದಲ್ಲಿ ಹಿಂದಿನ ವೈಭವದ ನೆನಪನ್ನು ಕವಿ ಹೆಣ್ಣೊಬ್ಬಳ ಮೊಗದಲ್ಲಿ ಕಾಣುವ ಕುಶಲತೆ ಜಾನಪದೀಯವಾದುದು.
        ನಾರೀ ನಿನ್ನ ಮಾರಿ ಮ್ಯಾಗ
        ನಗೀ ನವಿಲು ಆಡತ್ತಿತ್ತು
        ಆಡತ್ತಿತ್ತು ಓಡತ್ತಿತ್ತು
        ಮುಗಿಲ ಕಡೆಗೆ ನೋಡುತ್ತಿತ್ತು.
        ಕಣ್ಣಿನ್ಯಾಗ ಬಣ್ಣದ ನೋಟ
        ತಕ ತಕ ಕುಣಿದಾಡತಿತ್ತ
        ಕುಣೀತಿತ್ತ ಮಣೀತಿತ್ತ
        ಒನಪಿಲೆ ಒನದಾಡತಿತ್ತ
        ಕಣ್ಣೀರಿನ ಮಳೆಯ ಕೂಡ
        ತನ್ನ ದುಃಖ ತೋಡತಿತ್ತ
        ದೊರಕದಕ್ಕ ಬಾಡತಿತ್ತ
        ನೋವು, ವಿರಹದ ಸಂದರ್ಭವನ್ನು ಅಬಿವ್ಯಕ್ತಪಡಿಸುವಲ್ಲಿ ಕವಿ ಬಳಸಿಕೊಳ್ಳುವ ಭಾವನೆಗಳು ಹೃದಯ ಪೂರ್ವಕವಾದವುಗಳು. ಅಂತೆಯೇ ಜನಪದ ಮಾತು, ನಡೆನುಡಿ ಹೃದಯ ಪೂರ್ಣವಾದುದು. ಬೇಂದ್ರೆ ಅವರು ಹಳ್ಳಿಗರು ಆಡುವ ಮಾತು, ಆಡಿದ ಮಾತು ತುಂಬಾ ಸಹಜವಾಗಿ, ಸರಳವಾಗಿ ತಮ್ಮದಾಗಿಸಿ ಕೊಳ್ಳುತ್ತಾರೆ. ಗ್ರಾಮ್ಯ ಭಾಷೆಯನ್ನು ಕಾವ್ಯಲಿಪಿಗೆ ತರುವಾಗ ಬೇಂದ್ರೆಯವರು ತೋರುವ ಸಹಜತೆ, ಸರಳತೆ ಕನ್ನಡಕಾವ್ಯ ಸಂದರ್ಭದಲ್ಲಿಯೇ ವಿಸ್ಮಯವಾದುದು. ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಇಂಥದೊಂದು ಪ್ರಯೋಗ ಆರಂಬಿಸಿ ಕಾವ್ಯದ ನಿಜವಾದ ಶಕ್ತಿ ಸೌಂದರ್ಯವನ್ನು ಜಾನಪದದ ಮೂಲಕ ಪ್ರಕಟಪಡಿಸಿದ ಹಿರಿಮೆ ಬೇಂದ್ರೆಯವರದು. ಬೇಂದ್ರೆಯವರ ಮನೆಮಾತು ಕನ್ನಡವಾಗಿರಲಿಲ್ಲ. ಮರಾಠಿಮಯವಾಗಿದ್ದ ಪರಿಸರ, ಮರಾಠಿ ಮನೆಮಾತಾಗಿದ್ದ ನೆಲೆಯಲ್ಲಿ ಬೇಂದ್ರೆಯವರು ಜನರಾಡುವ ಮಾತನ್ನು ಕಾವ್ಯಕ್ಕೆ ತಂದದ್ದು ಒಂದು ಅಚ್ಚರಿ. ‘ಕನ್ನಡ ಮನೆ ಮಾತಾಗಿರದ ಕನ್ನಡ ಲೇಖಕರು ಹೆಚ್ಚಾಗಿ ಶಿಷ್ಟಭಾಷೆಯನ್ನೆ ಮಾಧ್ಯಮವನ್ನಾಗಿ ಉಪಯೋಗಿಸಿರುವುದು ಕಂಡುಬರುತ್ತದೆ. ಪಂಜೆ, ಕಾಮತ್, ಗೋವಿಂದ ಪೈ, ಮುಂತಾದವರ ಮಟ್ಟಿಗೆ ಬಹುಶಃ ಇದು ಆಯ್ಕೆಯ ಪ್ರಶ್ನೆಯಾಗಿರಲಾರದು; ಏಕೆಂದರೆ ದಕ್ಷಿಣ ಕನ್ನಡದಲ್ಲಿ ಸಾರ್ವತ್ರಿಕವಾಗಿ ಆಡುವ ಭಾಷೆಗೂ ಶಿಷ್ಟ ಭಾಷೆಗೂ ಹೆಚ್ಚಿನ ವ್ಯತ್ಯಾಸವಿರುವಂತೆ ಕಂಡು ಬರುವುದಿಲ್ಲ. ಆದರೆ ಬೇಂದ್ರೆಯವರ ಸಂದರ್ಭದಲ್ಲಿ ಜನಪದ ಭಾಷೆ ಅವರದೇ ಆಯ್ಕೆಯಾಗಿದೆ ಎಂದು ಕೆ.ವಿ.ತಿರುಮಲೇಶ್ ಹೇಳುವಲ್ಲಿ ಧಾರವಾಡ ಕೇಂದ್ರದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಕನ್ನಡ ನುಡಿಯ ಸಾಧನೆ, ಸಾಧ್ಯತೆಗಳನ್ನು ಸ್ಪಷ್ಟಪಡಿಸುತ್ತದೆ. ಏಕೆಂದರೆ ಬೇಂದ್ರೆ ಅವರು ಬರೆವ ಕಾಲಕ್ಕೆ ಜನಪದ ಗೀತೆಗಳು, ಶರೀಫ್ರ ರಚನೆಗಳು ಒಂದು ಬಗೆಯಲ್ಲಿ ದಟ್ಟ ಪ್ರಭಾವವನ್ನು ಉಂಟು ಮಾಡಿದ್ದವು. ಅನ್ಯಭಾಷೆಯ ಶರೀಫ್ರು ಕನ್ನಡ ಗ್ರಾಮ್ಯದಲ್ಲಿಯೇ ಕಾವ್ಯ ಕಟ್ಟಿದ್ದೂ ಬೇಂದ್ರೆಯವರ ಪ್ರೇರಣೆಗೆ ಕಾರಣವಿದ್ದಿತು. ಆಡುಮಾತನ್ನು ಕಾವ್ಯಕ್ಕೆ ತಂದ ಬೇಂದ್ರೆಯವರ ಸಾಧನೆ ಮತ್ತು ಸಿದ್ಧಿ ಗಮನಾರ್ಹವಾದುದು. ಭಾಷೆಯ ಸತ್ವವಿರುವುದೇ ಆಡುಮಾತಿನಲ್ಲಿ, ಆಡುಮಾತು ಒಂದು ಪಾತಳಿಗೆ ಸಿಗುವುದಿಲ್ಲ; ಅದರ ಪ್ರವಾಹವನ್ನೂ ಯಾರೊಬ್ಬರೂ ತಡೆಯಲಾರರು. ಯಾರು ಹಿಡಿದಿಡಲಾರದ ಜೀವವಿರುವುದೂ ಆಡುಮಾತಿನಲ್ಲೇ ಮಾತಾಡಬಲ್ಲವರ ಸ್ವಾತಂತ್ರ್ಯವನ್ನು ಯಾರೂ ಕದಿಯಲಾರರು’ ಎನ್ನುತ್ತಾನೆ ಗುಡಮನ್. ಭಾಷೆ ಗ್ರಾಂಥಿಕವಾದಾಗ ಅದು ಅಂತಃಸತ್ವವನ್ನು ಕಳೆದುಕೊಳ್ಳುತ್ತದೆ.
        ಇಂಥ ತತ್ವಹೀನ ಭಾಷೆಯಲ್ಲಿ ಕಾವ್ಯವನ್ನು ರಚಿಸಲಾಗುವುದಿಲ್ಲ. ಆದ್ದರಿಂದಲೆ ಬೇಂದ್ರೆ ಆಡುನುಡಿಯನ್ನು ಹಾಗೂ ಜನಪದ ಶೈಲಿಯನ್ನು ಕಾವ್ಯಕ್ಕೆ ಬಗ್ಗಿಸಲು ಮಾಡಿದ ನಿಧರ್ಾರ ಒಟ್ಟು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಮಹತ್ವವುಳ್ಳದ್ದು. ಬೇಂದ್ರೆಯವರ ಮಟ್ಟಿಗೆ ಹೇಳುವುದಾದರೆ ಇದರಿಂದ ಅವರು ಶಿಷ್ಟ ಭಾಷೆಯ ಮಡಿವಂತಿಕೆಯ ಬಂಧನದಿಂದ ಹೊರಬರುವುದು ಸಾಧ್ಯವಾಯಿತು. ಇನ್ನು ಹೊಸಗನ್ನಡ ಕಾವ್ಯದ ಮಟ್ಟಿಗೆ ನೋಡಿದರೆ, ಕಾವ್ಯದ ಭಾಷೆ ಮತ್ತು ಜನಪದದ ಮಧ್ಯೆ ತಲೆಹಾಕಿದ್ದ ದೊಡ್ಡ ಕಂದರವನ್ನು ಬಹುಮಟ್ಟಿಗೆ ಕಿರಿದಾಗಿಸಲು ಬೇಂದ್ರೆಯವರ ಪ್ರಯೋಗಗಳು ಕಾರಣವಾದವು. ಕೆ.ವಿ.ತಿರುಮಲೇಶರು ಇದನ್ನು ಇನ್ನಷ್ಟು ಸ್ಪಷ್ಟಪಡಿಸುತ್ತ ಜೆಕ್ ಲೇಖಕ ಶಾಲ್ದನ್ನು ನೆರೂದ ನಲ್ಲಿ ಕಂಡ ‘ತೊಳೆಯದ, ಬಾಚದ ಶಬ್ದಗಳನ್ನು ಬೀದಿಯಿಂದ ಹೆಕ್ಕಿ ಅದನ್ನು ಅನಂತತೆಯ ಸಂದೇಶ ವಾಹಕಗಳಾಗಿ ಮಾಡುವ ಎದೆಗಾರಿಕೆ ಬೇಂದ್ರೆಯವರಲ್ಲೂ ಕಾಣುತ್ತೇವೆ. ಆಡುಮಾತಿನ ಆಯ್ಕೆ ಮಾತ್ರ ಕಾವ್ಯವಾಗುವುದಿಲ್ಲ. ಅದರ ಬಳಕೆಯಲ್ಲಿ ತೋರುವ ಸೃಜನಶೀಲತೆ ಕವಿಯ ಪ್ರತಿಭೆಯನ್ನು ಅವಲಂಬಿಸಿದೆ. ದೈನಂದಿನ ಬಳಕೆಗೆ ಸಿಕ್ಕಿ ಸವೆದು ಹೋದ ಆಡುಮಾತು ಕಾವ್ಯರೂಪು ಪಡೆಯುವಲ್ಲಿ ಕವಿಯ ಸಿದ್ದಿ ಅಡಗಿದೆ. ಬೇಂದ್ರೆಯವರಾದರೂ ಜನಪದವನ್ನು ಹಾಗೆಯೆ ತೆಗೆದುಕೊಳ್ಳಲಿಲ್ಲ. ಅದೇ ರೀತಿ ತೊಳೆಯದ, ಬಾಚದ ಶಬ್ದಗಳಿಂದಷ್ಟೇ ಅವರು ತೃಪ್ತರಾಗಲೂ ಇಲ್ಲ. ತರ್ಕದ ಹಾಗೂ ಅರ್ಥದ ಆಚೆಗಿದನ್ನು ನೋಡುವುದಕ್ಕೆ ಅವರು ಮರೆಯಲಿಲ್ಲ. ಆದ್ದರಿಂದಲೇ, ಸಮರ್ಥವಾದ ಶೈಲಿ ಕೇವಲ ಭಾಷೆಯಷ್ಟೇ ಸಂಬಂದಿಸಿರದೆ, ಒಂದು ಸಮಗ್ರ ದೃಷ್ಟಿಕೋನಕ್ಕೆ ಸಂಬಂದಿಸಿರುತ್ತದೆ. ಬೇಂದ್ರೆಯವರಿಗೆ ದ್ಯಾವಾ-ಪೃಥವಿ ಎರಡೂ ಒಮ್ಮೆಲೆ ಬೇಕಾಯಿತು. ಜನಪದದ ಮೂಲಕ ಅವರು ಮಣ್ಣಿನ ಸಂಪರ್ಕ ಇಟ್ಟುಕೊಂಡಿದ್ದೇ ಆಕಾಶದ ಕಡೆಗೂ ಕೈ ಚಾಚಿದರು. ಜನಪದವನ್ನು ಮುಖ್ಯ ಮಾಧ್ಯಮವನ್ನಾಗಿ ಬೇಂದ್ರೆಯವರು ಆರಿಸಿಕೊಂಡರೂ ಅದರಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದರು. ಒಟ್ಟಾರೆ ಬೇಂದ್ರೆಯವರು ಬಳಸಿದ ಲಯ, ಭಾಷೆ, ಭಾವ ಬಹಳಷ್ಟು ಭಾರಿ ವಸ್ತು ಸಹ ಜಾನಪದದಿಂದ ಪಡೆದುದಾಗಿದೆ. ಗೊಂದಲಿಗರ ಹಾಡು, ದುರುಗಿ ಮುರಗವ್ವ, ಹರಕೆ ಹಾಡು, ಲಾವಣಿಕಾರರ ಪ್ರಾಸಿನ ಲಾಗು, ಗರತಿಯರ ಉಪಮೆ ಅವರ ಕವಿತೆಗಳಲ್ಲಿ ಧಾರಾಳವಾಗಿವೆ. ಅವರ ಕವಿತೆಗಳಲ್ಲಿ ವ್ಯಕ್ತವಾದ ಗಾಢವಾದ ಜಾನಪದ ಪ್ರಜ್ಞೆ ಅವರನ್ನು ಕನ್ನಡ ನವೋದಯದ ಕಾವ್ಯದ ‘ಜಾನಪದ ಗಾರುಡಿಗ’ ಎಂದೇ ಗುರುತಿಸಲಾಯಿತು.
        - ಡಾ.ಪ್ರಕಾಶ ಗ.ಖಾಡೆ
        (ಅವಧಿಯಲ್ಲಿ 31.1.2014 ಪ್ರಕಟ)
        Like ·  · 
        • Santhosh Kumar Vasista ಬೇಂದ್ರೆಯಜ್ಜನ ಬಗ್ಗೆ,ಅವರ ಕಾವ್ಯ ಚಿಂತನೆಯ ಬಗ್ಗೆ ಎಷ್ಟು ಹೇಳಿದರೂ ಸಾಕಾಗದು ಬಿಡಿ..! ಧನ್ಯವಾದ ನಿಮಗೆ ಇನ್ನಷ್ಟು ಹೇಳಿದ್ದಕ್ಕೆ ...
        • Shwetha Hosabale odiddini...chennagi barediddiri..thanks
        • Govind Kulkarni yugada kavi jagada kavi rushi kavi dattatreya ramachandra bendre
        • Manjunatha Maravanthe ಆಡುಮಾತಿನ ಕವಿತೆಯಿಂದ ನಾಡು ಜನರ ಹೃದಯತಟ್ಟಿದ ಬೇಂದ್ರೆಯವರ ಬಗ್ಗೆ ಸೊಗಸಾದ ಲೇಖನ.
        • Prashant Joshi ಜಾನಪದ ಭಾಷೆಯನ್ನು ಅವರಿಗಿಂತ ಚೆನ್ನಾಗಿ ಸಾಹಿತ್ಯಕ್ಕೆ ಬಳಸಿಕೊಂಡ ಉದಾಹರಣೆ ಕನ್ನಡದಲ್ಲಿ ಇನ್ನೊಂದಿಲ್ಲ. .. ಬೇಂದ್ರೆಯಜ್ಜರ ಕಾವ್ಯ ಪ್ರಾಕಾರವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು ಇಂಥ ಒಳ್ಳೆ ಬರಹಕ್ಕೆ\
        • Deepak Shinde satyagal paridhiyalli iddastu din manusya bramnirasan golluvadill allava sir
        • Irappa Kambali ಬೇಂದ್ರೆ ಯಾವತ್ತಿಗೂ ನಮಗೆ ಕಾಡುವ ಕವಿಯೇ ಸೈ! ಅಂಬಿಕಾತನಯದತ್ತನ ಕಾವ್ಯಕ್ಕೆ ಸುಂದರವಾದ ಅಡಿಟಿಪ್ಪಣಿ.
        • Prakash Khade
      • ಇಂದು 'ಕವಿ ದಿನ' .ಅವಧಿಯಲ್ಲಿ ಬೇಂದ್ರೆ ಅಜ್ಜನ ಪದ್ಯಗಳ ಕುರಿತು ನನ್ನ ಲೇಖನ.
        Like ·  ·